ಬಾಂಡುಗಳು
.
ವಿವಿಧ ಉದ್ಯಮ ಸಂಸ್ಥೆಗಳೂ ಕಾರ್ಖಾನೆಗಳು ತಮ್ಮಲ್ಲಿ ಹಣ ತೊಡಗಿಸಿದವರಿಗೆ ನೀಡುವ ಹಣ ಭದ್ರತಾ ಪತ್ರÀಗಳು. ಸರ್ಕಾರಿ ಅಥವಾ ಸರ್ಕಾರದ ಹತೋಟಿಗೊಳಪಟ್ಟ ಉದ್ಯಮ ಸಂಸ್ಥೆಗಳು ಮತ್ತು ಇತರ ಸಂಸ್ಥೆಗಳು ತಮಗೆ ಬೇಕಾದ ಬಂಡವಾಳ ಒದಗಿಸಿಕೊಳ್ಳುವ ಮಾರ್ಗಗಳಲ್ಲಿ ಬಾಂಡುಗಳನ್ನು ಹೊರಡಿಸುವುದೂ ಉಂಟು. ಬಂಡವಾಳದ ಕೊರತೆಯನ್ನು ತುಂಬಿಕೊಳ್ಳಲು ಕಾರ್ಖಾನೆಗಳೂ, ಸಂಸ್ಥೆಗಳೂ ಸಾಮಾನ್ಯವಾಗಿ ಮೂರು ಮಾರ್ಗಗಳನ್ನು ಅನುಸರಿಸುತ್ತವೆ.

1. ಕಂಪನಿಯ ಅಧಿಕೃತ ಬಂಡವಾಳದ ಮಿತಿ ಮೀರದಂತೆ ಷೇರು ಬಂಡವಾಳವನ್ನು ಹೆಚ್ಚಿಸಿಕೊಳ್ಳುವುದು. 2. ಬ್ಯಾಂಕುಗಳಿಂದಲೋ ಇತರ ಮೂಲಗಳಿಂದಲೋ ಸಾಲ ಪಡೆಯುವುದು. 3. ಷೇರುಗಳನ್ನು ನೀಡುವಂತೆಯೇ ಬಾಂಡುಗಳನ್ನು ನೀಡಿ ಸಾರ್ವಜನಿಕರಿಂದ ಸಾಲ ಪಡೆಯುವುದು. ಇವುಗಳಲ್ಲಿ ಮೊದಲನೆಯದನ್ನು ಸಂಸ್ಥೆಗಳು ಸಾಮಾನ್ಯವಾಗಿ ಕಟ್ಟಿ ಕಡೆಯದಾಗಿ ಮತ್ತು ಶಾಶ್ವತವಾಗಿ ಬಂಡವಾಳದ ಅವಶ್ಯಕತೆಯಿದ್ದ ಪಕ್ಷದಲ್ಲಿ ಮಾತ್ರ ಈ ಮಾರ್ಗವನ್ನವಲಂಬಿಸುತ್ತವೆ. ಏಕೆಂದರೆ ಒಮ್ಮೆ ಷೇರುಗಳನ್ನು ನೀಡಿ ಹಣ ಪಡೆದ ಮೇಲೆ ಅದನ್ನು ಸಾಮಾನ್ಯವಾಗಿ ಹಿಂದಿರುಗಿಸುವಂತಿಲ್ಲ. ಕೆಲಕಾಲದ ಅನಂತರ ಈ ಬಂಡವಾಳ ಅನಗತ್ಯವೆನಿಸದಾಗಲೂ ಇದನ್ನು ಉಳಿಸಿಕೊಂಡಿದ್ದು ಇದರ ಮೇಲೆ ಲಾಭಾಂಶ ಹಂಚಬೇಕಾಗುತ್ತದೆ. ಅಧಿಕೃತ ಬಂಡವಾಳದ ಮಿತಿಯನ್ನು ಸಂಸ್ಥೆಗಳು ಮುಟ್ಟಿದ್ದರೆ ಹೊಸದಾಗಿ ಷೇರುಗಳನ್ನು ನೀಡುವಂತೆಯೇ ಇಲ್ಲ. ಒಂದು ಪಕ್ಷ ಮಿತಿಯನ್ನು ತಲುಪದಿದ್ದಾಗಲೂ ಮುಂದಿನ ಅವಶ್ಯಕತೆಗಳಿಗಾಗಿ ಸಾಧ್ಯವಾದಷ್ಟೂ ಷೇರುಗಳನ್ನು ಉಳಿಸಿಕೊಳ್ಳುವುದು ಮೇಲು. ಬ್ಯಾಂಕು ಅಥವಾ ಇತರ ಮೂಲಗಳಿಂದ ಸಾಲ ಪಡೆÉಯುವುದು ಒಳ್ಳೆಯ ಕ್ರಮವೇ ಆದರೂ ವಾಣಿಜ್ಯ ಬ್ಯಾಂಕುಗಳು ಸಾಮಾನ್ಯವಾಗಿ ದೀರ್ಘಾವಧಿಯ ಸಾಲ ಕೊಡುವುದಿಲ್ಲ. ಹೀಗೆ ಸಂಸ್ಥೆಗಳಿಗೆ ದೀರ್ಘಾವಧಿಯ ಸಾಲ ಬೇಕಾಗಿದ್ದರೆ, ಸಂಸ್ಥೆಗಳ ಲಾಭದಿಂದಲೇ ಈ ಸಾಲದ ಹಣವನ್ನು ಕೂಡಿಸಿ ಕೆಲವು ವರ್ಷಗಳಾದ ಮೇಲೆ ಹಿಂದಿರುಗಿಸುವುದು ಸಾಧ್ಯವೆಂದು ಸಂಸ್ಥೆಗಳು ಭಾವಿಸುವುದಾದರೆ, ಆಗ ಬಾಂಡುಗಳನ್ನು ನೀಡುವುದರ ಮೂಲಕ ಸಾರ್ವಜನಿಕರಿಂದ ಹಣ ಎತ್ತುವುದೇ ಯುಕ್ತ ಮಾರ್ಗ. ಇದು ಸಂಸ್ಥೆಗಳು ಸಾಲವೆತ್ತಿದ ಬಂಡವಾಳ.

ಸಂಸ್ಥೆಗಳು ಈ ಬಗೆಯ ಬಂಡವಾಳಗಾರರಿಗೆ ಅಥವಾ ಸಾಲಗಾರರಿಗೆ ನೀಡುವ ಬಾಂಡಿನಲ್ಲಿ ಸಾಲದ ಮೊತ್ತವನ್ನು ಸಂಸ್ಥೆಯ ಅಧಿಕೃತ ಮುದ್ರೆಯ ಸಮೇತ ನಮೂದಿಸಿರುತ್ತೆ. ಬಾಂಡುಗಳ ನೀಡಿಕೆಗೆ ಸಂಬಂಧಿಸಿದ ನಿಬಂಧನೆಗಳನ್ನೂ ಪತ್ರದ ಹಿಂದೆ ಮುದ್ರಿಸಿರುತ್ತದೆ. ಪಾಮರ್ ವಿದ್ವಾಂಸನ ಪ್ರಕಾರ ಬಾಂಡು 'ಸಾಲ ಒಪ್ಪಿಗೆಯ ಅಂಶವನ್ನು ಒಳಗೊಂಡ ಮತ್ತು ಒಪ್ಪಂದದ ಕುರುಹಾಗಿ ನೀಡಿದ ಮೊಹರನ್ನುಳ್ಳ ಪತ್ರ.

ಸಂಸ್ಥೆ ತನ್ನ ಬಂಡವಾಳದ ಅಗತ್ಯವನ್ನು ಅಂದಾಜು ಮಾಡಿ ಅಷ್ಟು ಮೊತ್ತದ ಷೇರುಗಳನ್ನು ನೀಡುವಂತೆಯೇ, ತನಗೆ ಸಾಲವಾಗಿ ಬೇಕಾಗುವ ಹಣವನ್ನು ಅಂದಾಜು ಮಾಡಿ ಅದನ್ನು ನಿರ್ದಿಷ್ಟ ಮೊತ್ತದ ಬಾಂಡುಗಳಾಗಿ ವಿಭಾಗಿಸುತ್ತದೆ. ಉದಾಹರಣೆಗೆ, ಕಂಪನಿಗೆ 10 ಲಕ್ಷ ರೂಪಾಯಿಗಳಾಗಿ ಸಾಲ ಬೇಕಾಗಿದ್ದರೆ ಅದನ್ನು 100 ರೂಪಾಯಿಗಳ 10,000 ಬಾಂಡುಗಳಾಗಿ ವಿಭಾಗಿಸಿ ವೃತ್ತಪತ್ರಿಕೆಗಳಲ್ಲಿ ಜಾಹಿರಾತು ಕೊಟ್ಟು ಸಾರ್ವಜನಿಕರು ಬಾಂಡುಗಳನ್ನು ಕೊಳ್ಳಲು ಆಹ್ವಾನಿಸಲಾಗುತ್ತದೆ. ಕೊಳ್ಳಬಯಸಿದವರಿಂದ ಹಣ ಪಡೆದು ಬಾಂಡುಗಳನ್ನು ನೀಡಲಾಗುತ್ತದೆ. ಬಾಂಡುಗಳನ್ನು ಕೊಂಡವರನ್ನೆ ಸಂಸ್ಥೆಗೆ ಸಾಲ ಕೊಟ್ಟವರೆಂದು ಪರಿಗಣಿಸಲಾಗುವುದು. ಬಾಂಡುಗಳ ಮೇಲೆ ನಿರ್ದಿಷ್ಟ ದರದ ಬಡ್ಡಿ ಕೊಡಲಾಗುತ್ತದೆ. ಬಡ್ಡಿಯ ದರದ ಆಧಾರದ ಮೇಲೆ ಬಾಂಡುಗಳನ್ನು ವರ್ಗೀಕರಿಸುವುದುಂಟು. ಉದಾಹರಣೆಗೆ, ಶೇಕಡಾ 6ರ ಬಡ್ಡಿಯ ದರ ಹೊಂದಿರುವ ಬಾಂಡುಗಳನ್ನು ಶೇಕಡಾ 6ರ ಬಾಂಡುಗಳು ಎನ್ನುತ್ತಾರೆ. ಬಾಂಡುಗಳ ನೀಡಿಕೆಯ ಷರತ್ತುಗಳು ಮತ್ತು ವಿಧಿಗಳಿಗೆ ಅನುಸಾರವಾಗಿ ಬಾಂಡುಗಳನ್ನು ನಾನಾ ವಿಧಿಗಳಾಗಿ ವಿಂಗಡಿಸಬಹುದು.

	1 ನೋಂದಾಯಿತ ಮತ್ತು ನೋಂದಾಯಿಸದ ಅಥವಾ ವಾಹಕ ಬಾಂಡುಗಳು: ಬಾಂಡುದಾರನ ಹೆಸರು, ವಿಳಾಸ, ಅವನು ಪಡೆದಿರುವ ಬಾಂಡುಗಳ ವಿವರ ಇತ್ಯಾದಿಗಳನ್ನು ಸಂಸ್ಥೆಯ ಪುಸ್ತಕದಲ್ಲಿ ನೋಂದಾಯಿಸಿಕೊಂಡಿದ್ದರೆ ಅಂಥ ಬಾಂಡುಗಳನ್ನು ನೋಂದಾಯಿತ ಬಾಂಡುಗಳು (ರಿಜಿಸ್ಟರ್ಡ್ ಬಾಂಡು) ಎನ್ನುತ್ತಾರೆ. ಇದನ್ನು ಹಸ್ತಾಂತರಿಸುವಂತಿಲ್ಲ. ಹೀಗೆ ಮಾಡ ಬಯಸಿದರೆ ಬಾಂಡುದಾರ ತನ್ನ ಮತ್ತು ತನ್ನಿಂದ ಬಾಂಡ್ ಕೊಳ್ಳುವವನ ಹಸ್ತಾಕ್ಷರ ಮತ್ತು ನಿರ್ದಿಷ್ಟ ಮೌಲ್ಯದ ಸ್ಟಾಂಪ್ ಇರುವ ಹಸ್ತಾಂತರ ಒಪ್ಪಿಗೆ ಪತ್ರವನ್ನು ಸಂಸ್ಥೆಗೆ ಕಳುಹಿಸಿ ನಿರ್ದೇಶಕ ಮಂಡಳಿಯ ಅನುಮೋದನೆ ಪಡೆಯಬೇಕಾಗುವುದು. ಇದು ದೊರೆತ ಬಳಿಕ ಸಂಸ್ಥೆಯ ನೋಂದಣಿ ಪುಸ್ತಕದಲ್ಲಿ ಹಳೆಯ ಬಾಂಡುದಾರನ ಹೆಸರನ್ನು ತೆಗೆದುಹಾಕಿ ಹೊಸ ಬಾಂಡುದಾರನ ಹೆಸರನ್ನು ನಮೂದಿಸಲಾಗುತ್ತದೆ. ಮತ್ತು ಹಳೆಯ ಬಾಂಡನ್ನು ರದ್ದುಗೊಳಿಸಿ ಹೊಸ ಬಾಂಡನ್ನು ನೀಡಲಾಗುತ್ತದೆ.

	ಸಂಸ್ಥೆಯ ನೋಂದಣಿ ಪುಸ್ತಕದಲ್ಲಿ ದಾಖಲಾದ ಬಾಂಡುಗಳಿಗೆ ನೋಂದಾಯಿಸದ ಅಥವಾ ವಾಹಕ ಬಾಂಡುಗಳೆಂದು ಹೆಸರು (ಅನ್‍ರಿಜಿಸ್ಟರ್ಡ್ ಅಥವಾ ಬೇರರ್ ಬಾಂಡುಗಳು.) ಇವನ್ನು ಹೊಂದಿರುವವರೇ (ವಾಹಕ) ಇವುಗಳ ಹಕ್ಕುದಾರರು. ಇವುಗಳ ಹಸ್ತಾಂತರವನ್ನು ಕಂಪನಿ ಗುರುತಿಸುವುದಿಲ್ಲ. ಬಾಂಡುಗಳಿಗೆ ಲಗತ್ತಾಗಿರುವ ಕೂಪನುಗಳನ್ನು ಸಂಬಂಧಿಸಿದ ಸಂಸ್ಥೆಗಳಿಗೆ ಸಲ್ಲಿಸಿ ಬಡ್ಡಿಯನ್ನು ಪಡೆಯಬೇಕು.

	2 ಆಧಾರಿತ ಅಥವಾ ಅಡಮಾನ ಮತ್ತು ಆಧಾರಿತ ಅಥವಾ ಸರಳ ಬಾಂಡುಗಳು: ಆಧಾರಿತ ಅಥವಾ ಅಡಮಾನ ಬಾಂಡುಗಳಿಗೆ (ಸೆಕ್ಯೂರ್ಡ್ ಅಥವಾ ಮಾರ್ಟ್‍ಗೇಜ್) ಸಂಸ್ಥೆಯ ಯಾವುದಾದರೂ ಸ್ಥಿರ (ಫಿಕ್ಸೆಡ್) ಅಥವಾ ಕಾಲದಿಂದ ಕಾಲಕ್ಕೆ ವ್ಯತ್ಯಾಸಗೊಳ್ಳುವ (ಫ್ಲೋಟಿಂಗ್) ಆಸ್ತಿಯ ಆಧಾರ ನೀಡುತ್ತದೆ. ಸಂಸ್ಥೆಯ ಬಾಂಡುಗಳನ್ನು ನೀಡುವಾಗ ಮಾಡಿಕೊಂಡ ಕರಾರುಗಳಿಗೆ ತಪ್ಪಿದರೆ ಅಥವಾ ದಿವಾಳಿಯಾದರೆ ಬಾಂಡುದಾರರು ತಮಗೆ ಬಾಕಿ ಉಳಿದ ಬಡ್ಡಿ ಮತ್ತು ಅಸಲನ್ನು ಸಂಸ್ಥೆ ಆಧಾರವಾಗಿ ನೀಡಿರುವ ಆಸ್ತಿಗಳಿಂದ ಪಡೆಯುವ ಹಕ್ಕು ಹೊಂದಿರುತ್ತಾರೆ. ಸಂಸ್ಥೆಗಳು ನೀಡುವ ಆಧಾರ ಎರಡು ರೀತಿಯದಾಗಿರುತ್ತದೆ: (1) ನಿಗದಿತ ಆಸ್ತಿಗಳ ಆಧಾರ ಮತ್ತು (2) ಅನಿಗದಿತ ಆಸ್ತಿಗಳ ಆಧಾರ. ಮೊದಲನೆಯ ರೀತಿಯ ಆಧಾರದಲ್ಲಿ ಬಾಂಡುಗಳಿಗೆ ಕೆಲವು ನಿರ್ದಿಷ್ಟ ಆಸ್ತಿಗಳ ಆಧಾರ ನೀಡಲಾಗುತ್ತದೆ. ಬಾಂಡುದಾರರಿಗೆ ಆ ಆಸ್ತಿಗಳ ಮೇಲೆ ಮಾತ್ರ ಹಕ್ಕು ಇರುತ್ತದೆ. ಎರಡನೆಯ ರೀತಿಯ ಆಧಾರದಲ್ಲಿ ಸಂಸ್ಥೆಯ ಸದ್ಯದ ಮತ್ತು ಭವಿಷ್ಯದಲ್ಲಿ ಹೊಂದಬಹುದಾದ ಎಲ್ಲ ಆಸ್ತಿಗಳು ಆಧಾರವಾಗಿರುತ್ತವೆ. ಸಂಸ್ಥೆ ಕರಾರಿಗೆ ತಪ್ಪಿದಾಗ ಬಾಂಡುದಾರರು ಲಭ್ಯವಿರುವ ಸಂಸ್ಥೆಯ ಯಾವುದೇ ಆಸ್ತಿಯ ಮೇಲೆ ಹಕ್ಕು ಪಡೆಯುತ್ತಾರೆ.

	ಬಡ್ಡಿ ಪಾವತಿ ಅಥವಾ ಅಸಲಿನ ಮರುಪಾವತಿ ಬಗ್ಗೆ ಯಾವುದೇ ರೀತಿಯ ಆಧಾರ ಹೊಂದಿರದ ಬಾಂಡುಗಳು ಅನಾಧಾರಿತ (ಅನ್‍ಸೆಕ್ಯೂರ್ಡ್) ಅಥವಾ ಸರಳ (ನೆಕೆಡ್) ಬಾಂಡುಗಳು. ಈ ಬಾಂಡುದಾರರಿಗೆ ಸಂಸ್ಥೆಯ ಸಾಲ ಮರುಪಾವತಿಯ ಸಾಮಥ್ರ್ಯವೇ ಆಧಾರ. ಸಂಸ್ಥೆ ಮುಚ್ಚಿದಾಗ ಸಾಲ ಮರುಪಾವತಿಯ ಬಗ್ಗೆ ಯಾವುದೇ ಆದ್ಯತೆ ಇರುವುದಿಲ್ಲ.

	3 ಮೋಚ್ಯ ಮತ್ತು ಅಮೋಚ್ಯ ಬಾಂಡುಗಳು: ಮೋಚ್ಯ ಬಾಂಡುಗಳನ್ನು (ರಿಡೀಮಬಲ್) ಸಾಮಾನ್ಯವಾಗಿ ಒಂದು ನಿರ್ದಿಷ್ಟ ಅವಧಿಯ ಮಟ್ಟಿಗೆ ಬಿಡುಗಡೆ ಮಾಡಲಾಗುತ್ತದೆ. ಈ ಬಾಂಡುಗಳು ಹಣವನ್ನು ನಿಗದಿಯಾದ ಒಂದು ದಿನಾಂಕದಂದು ಬಾಂಡುದಾರರಿಗೆ ಹಿಂದಿರುಗಿಸಬೇಕು; ಅಥವಾ ಸಂಸ್ಥೆಯ ಇಚ್ಛೆಯಂತೆ, ಇಲ್ಲವೆ ನಿಗದಿಯಾದ ಅವಧಿಯಲ್ಲಿ ಕಂತುಗಳಾಗಿ ಹಣವನ್ನು ಬಾಂಡುದಾರರಿಗೆ ಹಿಂದಿರುಗಿಸಬಹುದು. ಅಮೋಚ್ಯ (ಇರಿಡೀಮಬಲ್) ಬಾಂಡುಗಳ ಹಣದ ಪಾವತಿಗೆ ಯಾವ ಅವಧಿಯನ್ನೂ ನಿಗದಿ ಮಾಡಿರುವುದಿಲ್ಲ. ಆದರೆ ಸಂಸ್ಥೆ ಸುಸೂತ್ರವಾಗಿ ನಡೆಯುತ್ತಿದ್ದು ಬಾಂಡುದಾರರಿಗೆ ಕ್ರಮವಾಗಿ ಬಡ್ಡಿ ಪಾವತಿಯಾಗುತ್ತಿರುವ ತನಕವೂ ಅವರು ತಮ್ಮ ಹಣವನ್ನು ವಾಪಸು ಕೇಳುವ ಹಾಗಿಲ್ಲ. ಬಾಂಡುಗಳು ಮೋಚ್ಯವಾಗಿರಲಿ, ಅಮೋಚ್ಯವಾಗಿರಲಿ ಸಂಸ್ಥೆಯ ಕೊನೆಗಾಲದಲ್ಲಿ ಬಾಂಡುಗಳ ಹಣ ಹಿಂದಿರುಗಿಸತಕ್ಕದ್ದು.

	4 ಪರಿವರ್ತನೀಯ ಬಾಂಡುಗಳು: ಈ ಬಾಂಡುಗಳನ್ನು ಗೊತ್ತಾದ ಅವಧಿಯ ತರುವಾಯ ಗೊತ್ತಾದ ದರದಲ್ಲಿ ಅಧಿಮಾನ (ಪ್ರಿಫರೆನ್ಸ್) ಅಥವಾ ಸಾಮ್ಯಷೇರುಗಳಾಗಿ ಪರಿವರ್ತಿಸಿಕೊಳ್ಳಲು ಬಾಂಡುದಾರರಿಗೆ ಅವಕಾಶವಿರುತ್ತದೆ. ಈ ಹಕ್ಕನ್ನು ಚಲಾಯಿಸಿದ ಬಾಂಡುದಾರರು ಸಂಸ್ಥೆಯ ಷೇರುದಾರರಾಗಿ ಪರಿವರ್ತನೆ ಹೊಂದುತ್ತಾರೆ.

	ಷೇರುದಾರರಿಗೂ ಬಾಂಡುದಾರರಿಗೂ ಕೆಲವು ಮುಖ್ಯ ವ್ಯತ್ಯಾಸಗಳಿವೆ. ಷೇರುದಾರ ಸಂಸ್ಥೆಯ ಒಡೆಯ. ಆದ್ದರಿಂದ ಅವನು ಸಂಸ್ಥೆಯ ಸಾಲಗಳಿಗೆ (ಸಾಮಾನ್ಯವಾಗಿ ಅವನ ಷೇರುಗಳ ಅಂಕಿತ ಮೌಲ್ಯದ ಮಿತಿಯವರೆಗೆ) ಹೊಣೆಯಾಗಿರುತ್ತಾನೆ. ಬಾಂಡುದಾರ ಸಂಸ್ಥೆಯ ಒಡೆಯನಲ್ಲ. ಅವನು ಅದರ ಸಾಲಿಗ, ಬಾಂಡು ಸಂಸ್ಥೆಯ ಸಾಲಿಗನಾದ್ದರಿಂದ ಸಂಸ್ಥೆ ಲಾಭ ಗಳಿಸಲಿ ಬಿಡಲಿ ಬಾಂಡಿನ ಮೇಲೆ ನಿಗದಿಯಾದ ದರದಲ್ಲಿ ಬಡ್ಡಿ ಪಡೆಯುವ ಹಕ್ಕು ಅವನಿಗೆ ಇರುತ್ತದೆ. ಆದರೆ ಸಂಸ್ಥೆ ಲಾಭಗಳಿಸಿದಾಗ ಮಾತ್ರವೇ ಷೇರುದಾರ ಲಾಭಾಂಶ ಪಡೆಯುತ್ತಾನೆ.

	ಬಾಂಡುಗಳ ಹಣವನ್ನು ಸಂಸ್ಥೆ ಅದರ ನೀಡಿಕೆಯ ವಿಧಿಗಳಿಗೆ ಅನುಗುಣವಾಗಿ ಗೊತ್ತಾದ ಅವಧಿಯ ಮೇಲೆ ಹಿಂದಿರುಗಿಸಬೇಕು. ಷೇರುಗಳ ಮೊಬಲಗನ್ನು ಸಾಮಾನ್ಯವಾಗಿ ಹಿಂದಿರುಗಿಸುವುದಿಲ್ಲ. ಹಣ ವಾಪಸು ಕೊಡದ ಬಾಂಡುಗಳನ್ನು ಸಂಸ್ಥೆ ಕೆಲವು ವೇಳೆ ನೋಡಬಹುದು. ಅವು ಅಮೋಚ್ಯ ಬಾಂಡುಗಳು. ಕೆಲವು ಷೇರುಗಳನ್ನು ನಿಗದಿಯಾದ ಅವಧಿಯ ಬಳಿಕ ಹಿಂದಿರುಗಿಸಬಹುದು. ಅವು ಮೋಚ್ಯ, ಅಧಿಮಾನ (ರಿಡೀಮಬಲ್-ಪ್ರಿಫರೆನ್ಸಿಯಲ್) ಷೇರುಗಳು, ಇಂಥ ಷೇರುಗಳು ಬಹಳ ಅಪರೂಪ.

ಸಂಸ್ಥೆಯ ಅಂತಿಮ ಕಾಲದಲ್ಲಿ ಬಾಂಡುದಾರರಿಗೆ ಕೊಡಬೇಕಾದ ಹಣವನ್ನು ಮೊದಲು ಕೊಡಬೇಕು. ಸಂಸ್ಥೆಯ ಎಲ್ಲ ಋಣಗಳನ್ನೂ ತೀರಿಸಿದ ಅನಂತರವೆ ಷೇರುದಾರರ ಹಣ ಹಿಂದಿರುಗಿಸುವ ಪ್ರಶ್ನೆ ಉದ್ಭವಿಸುವುದು. ಬಾಂಡುದಾರ ಸಂಸ್ಥೆಯ ಒಡೆಯನಲ್ಲವಾದ್ದರಿಂದ ಅವನಿಗೆ ಸಂಸ್ಥೆಯ ಸಭೆಗಳಲ್ಲಿ ಮತ್ತು ಅದರ ಕಲಾಪಗಳಿಗೆ ಸಂಬಂಧಿಸಿದ ವಿಚಾರಗಳಲ್ಲಿ ಮತ ನೀಡುವ ಅಧಿಕಾರವಿರುವುದಿಲ್ಲ, ಆದರೆ ಷೇರುದಾರರಿಗೆ ಈ ಅಧಿಕಾರವುಂಟು. ಬಾಂಡು ಮತ್ತು ಬಾಂಡು ಸ್ಟಾಕುಗಳ ವ್ಯತ್ಯಾಸ ಷೇರು ಮತ್ತು ಸ್ಟಾಕುಗಳಿಗಿರುವ ವ್ಯತ್ಯಾಸದಷ್ಟೆ. ಸಂಸ್ಥೆ ಸಾಲ ನೀಡಿದವರಿಗೆ ನೀಡುವ ಭದ್ರತಾ ಪತ್ರವೇ ಬಾಂಡು. ಇದಕ್ಕೆ ಭಿನ್ನವಾಗಿ ಸಾರ್ವಜನಿಕರಿಂದ ಪಡೆದ ಎಲ್ಲ ಸಾಲಗಳ ಮೊತ್ತವನ್ನು ಬಾಂಡು ಸ್ಟಾಕು ಎನ್ನುತ್ತಾರೆ. ಈ ಮೊತ್ತವನ್ನು ಚಿಕ್ಕ ಚಿಕ್ಕ ಮೊತ್ತದ ಘಟಕಗಳಾಗಿ ವಿಭಾಗಿಸಬಹುದು. ಬಾಂಡು ಸ್ಟಾಕುಗಳನ್ನು ಕೆಲ ಬಡವರಿಗೆ ಬಾಂಡು ಸ್ಟಾಕು ಪತ್ರಗಳನ್ನು ನೀಡಲಾಗುತ್ತದೆ. ಆದಾಗ್ಯೂ ಒಬ್ಬ ವ್ಯಕ್ತಿ ಸಂಸ್ಥೆಗೆ 100 ರೂಪಯಿಗಳ ಸಾಲ ನೀಡಿದರೆ ಅವನು ಬಾಂಡುದಾರನಾಗಿರಬಹುದು ಅಥವಾ ಬಾಂಡು ಸ್ಟಾಕುದಾರನಾಗಿರಲೂಬಹುದು. ಹೇಗಿದ್ದರೂ ಇವನಿಗೆ ಕಂಪನಿಯ ಸಭೆಗಳಲ್ಲಿ ಮತ ನೀಡುವ ಅಧಿಕಾರವಿರುವುದಿಲ್ಲ.

ಬಾಂಡು ಬಿಡುಗಡೆ ಮಾಡಲು ಪಾಲಿಸಬೇಕಾದ ನಿಬಂಧನೆಗಳು: ಭಾರತೀಯ ಸಾರ್ವಜನಿಕ ಉದ್ಯಮ ಸಂಸ್ಥೆಗಳು ಬಾಂಡುಗಳನ್ನು ಬಿಡುಗಡೆ ಮಾಡುವಾಗ ಸರ್ಕಾರ ಪ್ರಕಟಿಸಿರುವ (13 ಸೆಪ್ಟೆಂಬರ್ 1978) ಈ ಮುಂದಿನ ನಿಬಂಧನೆಗಳನ್ನು ಪಾಲಿಸಬೇಕಾಗುವುದು. ಇವು ಕಾರ್ಯಶೀಲ ಬಂಡವಾಳದ ಅಗತ್ಯ ಪೂರೈಕೆಗಾಗಿ ದೀರ್ಘಾವಧಿ ಸಾಲಗಳನ್ನು ಎತ್ತುವುದಕ್ಕೆ ಮಾತ್ರ ಅನ್ವಯಿಸುತ್ತವೆ. ವಿಸ್ತರಣೆಯ ಕಾರ್ಯಗಳಂಥ ಚಟುವಟಿಕೆಗಳಿಗೆ ದೀರ್ಘಾವಧಿ ಸಾಲ ಎತ್ತುವುದಕ್ಕೆ ಅನ್ವಯಿಸುವುದಿಲ್ಲ. ಸಂಸ್ಥೆಯ ಚಾಲ್ತಿ ಆಸ್ತಿಗಳು, ಸಾಲಗಳು ಮತ್ತು ಮುಂಗಡಗಳ ಮೊತ್ತದಲ್ಲಿ ಸಂಸ್ಥೆಗೆ ಸದ್ಯದಲ್ಲಿ ಲಭ್ಯವಿರುವ ಅಲ್ಪಾವಧಿ ನಿಧಿಯನ್ನು ಕಳೆದ ಬಳಿಕ ಉಳಿಯುವ ಮೊತ್ತದ ಶೇಕಡಾ 20ಕ್ಕಿಂತ ಬಾಂಡುಗಳ ಮೊತ್ತ ಹೆಚ್ಚಾಗಬಾರದು. ಬಿಡುಗಡೆ ಮಾಡಬೇಕೆಂದಿರುವ ಬಾಂಡುಗಳೂ ಸೇರಿದಂತೆ ಸಾಲ ಸಮಾನತೆಯ ಪ್ರಮಾಣ (ಡೆಟ್ ಇಕ್ವಿಟಿ ರೇಷಿಯೊ) 1:1 ಕ್ಕೆ ಮೀರಬಾರದು. ಬಾಂಡುಗಳಿಗೆ ಆರು ತಿಂಗಳುಗಳಿಗೊಮ್ಮೆ ಬಡ್ಡಿ ಪಾವತಿ ಮಾಡಬೇಕು. ಏಳು ವರ್ಷಗಳ ಅವಧಿಯಲ್ಲಿ ಫಲಿಸುವ ಬಾಂಡುಗಳ ಮೇಲೆ ಶೇಕಡಾ 10.5 ದರದಲ್ಲಿ ಬಡ್ಡಿ ಕೊಡಬೇಕು ಮತ್ತು 8 ರಿಂದ 12 ವರ್ಷಗಳ ಅವಧಿಯಲ್ಲಿ ಫಲಿಸುವ ಬಾಂಡುಗಳ ಮೇಲೆ ಶೇಕಡಾ 11 ದರದ ಬಡ್ಡಿ ಕೊಡಬೇಕು. ಹಿಂದಿನ ಮೂರು ವರ್ಷಗಳಲ್ಲಿ ಷೇರುಗಳ ಮೇಲಿನ ಲಾಭಾಂಶ ಅತ್ಯಂತ ಹೆಚ್ಚಾಗಿರುವ ಯಾವುದೇ ವರ್ಷದಲ್ಲಿ ರಿಯಾಯಿತಿ ನೀಡಿದ ಬಾಂಡುಗಳನ್ನು ಬಿಡುಗಡೆ ಮಾಡಬಹುದು. ಅಥವಾ ಬಾಂಡುಗಳ ಮೇಲೆ ಶೇಕಡಾ ಅರ್ಧದಷ್ಟು ಹೆಚ್ಚು ಬಡ್ಡಿ ನೀಡಬಹುದು. 7 ವರ್ಷಗಳ ಅವಧಿಯಲ್ಲಿ ಫಲಿಸುವ ಬಾಂಡುಗಳ ಹಣವನ್ನು ಶೇಕಡಾ 33.13 ಪ್ರಮಾಣದಲ್ಲಿ 5, 6 ಮತ್ತು 7ನೆಯ ವರ್ಷಗಳಲ್ಲಿ ನೀಡಬೇಕು. 8 ರಿಂದ 12 ವರ್ಷಗಳ ಅವಧಿಯಲ್ಲಿ ಫಲಿಸುವ ಬಾಂಡುಗಳ ಹಣವನ್ನು ಶೇಕಡಾ 20 ಪ್ರಮಾಣದಲ್ಲಿ 8, 9, 10, 11, 12ನೆಯ ವರ್ಷಗಳಲ್ಲಿ ಹಿಂದಿರುಗಿಸಬೇಕು. ಪ್ರತಿ ಬಾಂಡಿನ ಮುಖ ಬೆಲೆ 100 ರೂಪಾಯಿಗಳಾಗಿರಬೇಕು. ಬಾಂಡುಗಳನ್ನು ಕೊಳ್ಳಲು ಮೊದಲು ಭಾರತೀಯ ಷೇರುದಾರರನ್ನು ಆಹ್ವಾನಿಸಬೇಕು. ಮಾರಾಟವಾಗದೆ ಉಳಿದ ಬಾಂಡುಗಳಿದ್ದರೆ ಯುಕ್ತಾಯುಕ್ತತೆಯ ಆಧಾರದ ಮೇಲೆ ಈ ಮುಂದೆ ಹೇಳುವ ಮಂದಿಗೆ ಹಂಚಬಹುದು. ಇನ್ನಷ್ಟು ಬಾಂಡುಗಳನ್ನು ಕೊಳ್ಳಬಯಸುವ ಸಂಬಂಧಪಟ್ಟ ಸಂಸ್ಥೆಯ ಷೇರುದಾರರು, ಸಂಸ್ಥೆಯಲ್ಲಿ ಠೇವಣಿ ಇಟ್ಟಿರುವವರು. ಕಂಪನಿಯ ನೌಕರ ಹಾಗೂ ವ್ಯಾಪಾರ ವರ್ಗದವರು, ಬಾಂಡುಗಳ ಮೊತ್ತದ ಶೇಕಡಾ 75 ರಷ್ಟು ವಂತಿಗೆ ಸಂದಾಯವಾದ ಅನಂತರವೇ ಬಾಂಡುಗಳನ್ನು ಹಂಚಬೇಕು. ಒಟ್ಟಿನಲ್ಲಿ ಭಾರತೀಯ ಕೈಗಾರಿಕೋದ್ಯಮಗಳಲ್ಲಿ ಷೇರುಗಳಂತೆಯೇ ಬಾಂಡುಗಳ ಪಾತ್ರ ಮಹತ್ವವಾದದು.     (ಕೆ.ಜಿ.ಒ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ